ಪುಸ್ತಕದ ಬಗ್ಗೆ: ಶಿನ್ ಬೆತ್ : ಇಸ್ರೇಲ್‌ನ ನಿಗೂಢ ಬೇಹುಗಾರಿಕಾ ದಳ
ಈ ಇಡೀ ಕೃತಿ ತುಂಬಿ ಹರಿಯುವ ಮಳೆಗಾಲದ ನದಿಯಂತೆ. ಎಲ್ಲೂ ಇದು ಬೇಸಗೆಯ ನದಿಯಂತೆ ಸೊರಗಿ
ಒಂದಕ್ಕೊಂದು ಸಂಪರ್ಕವಿಲ್ಲದ ಪ್ರತ್ಯೇಕ ಗುಂಡಿಗಳಾಗುವುದಿಲ್ಲ. ಶಿನ್ ಬೆತ್‌ನ ಬಗ್ಗೆ ವಿವರಗಳನ್ನು
ಹೇಳುತ್ತಲೇ ಇಸ್ರೇಲ್‌ನ ಸುರಕ್ಷಾ ಸಂಕಷ್ಟದ ಎಲ್ಲ ಆಯಾಮಗಳನ್ನೂ ತೆರೆದಿಟ್ಟು ಅಂತಹದೊಂದು ಸಂಸ್ಥೆಯ
ಅಗತ್ಯ ಆ ಯೆಹೂದಿ ದೇಶಕ್ಕೆ ಏಕಾಯಿತೆನ್ನುವುದನ್ನು ಲೇಖಕರು ಓದುಗರಿಗೆ ಮನಗಾಣಿಸುತ್ತಾರೆ. ಒಂದು
ರಾಷ್ಟ್ರವಾಗಿ ಇಸ್ರೇಲ್‌ನ ಬದುಕನ್ನು, ಅದರ ಆಂತರಿಕ ಸುರಕ್ಷಾ ಸಂಸ್ಥೆಯಾಗಿ ಶಿನ್ ಬೆತ್
ಚಟುವಟಿಕೆಗಳನ್ನು, ಯಶಸ್ಸುಗಳನ್ನು, ವೈಫಲ್ಯಗಳನ್ನು ಸ್ಪಷ್ಟ ಕಾಲಾನುಕ್ರಮಣಿಕೆಯಲ್ಲಿ ಸವಿವರವಾಗಿ
ದಾಖಲಿಸಿರುವುದು ಈ ಕೃತಿಯನ್ನು ಒಂದು ಮಹತ್ವದ ಆಕರ ಗ್ರಂಥದ ಸ್ಥಾನಕ್ಕೇರಿಸಿದೆ.
ಡಾ. ಗುರುಪ್ರಸಾದ್ ಇಷ್ಟು ಶ್ರಮವಹಿಸಿ ರಚಿಸಿರುವ ಈ ಕೃತಿ ಇಸ್ರೇಲ್ ಬಗ್ಗೆ, ಪ್ಯಾಲೆಸ್ತೀನಿಯನ್ನರ
ಬಗ್ಗೆ, ಹಮಾಸ್ ಬಗ್ಗೆ ಒಟ್ಟಾರೆ ಲೆವಾಂಟ್‌ನ ಸಂಕೀರ್ಣ ವಾಸ್ತವಗಳ ಬಗ್ಗೆ ಸತ್ಯವನ್ನು
ಅರಿಯಲಿಚ್ಚಿಸುವವರಿಗೆ ಅತ್ಯಗತ್ಯ ಕೈಪಿಡಿ.